ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/75

ಈ ಪುಟೊನು ಪ್ರಕಟಿಸದ್ ಆಂಡ್

ಶಪಿಸುವವರನ್ನು ಆಶೀರ್ವದಿಸಿರಿ, ನಿಮಗೆ ಹಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮಗೆ ಹಿಂಸೆಯೂ ನಿಂದೆಯೂ ಮಾಡುವವರಿಗೋಸ್ಕರ ಪ್ರಾರ್ಥಿಸಿರಿ

ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕೃತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು. ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಕನ್ನಡದ ಮೊದಲ ಪತ್ರಿಕೆಯ ಮೂಲಕ ಮೊತ್ತ ಮೊದಲ ಬಾರಿಗೆ ಮುದ್ರಣದ ಮೂಲಕ ಬೆಳಕಿಗೆ ಬಂದಿರುವುದು ಗಮನಾರ್ಹವಾಗಿದೆ. ಕರ್ನಾಟಕ ಕೈಸ್ತರ ಇತಿಹಾಸ ಎಂಬ ಕೃತಿಯಲ್ಲಿ ಬಿ.ಎಸ್‌. ತಲ್ವಾಡಿಯವರು ಈಬಗ್ಗೆ ಉಲ್ಲೇಖಿಸಿದ್ದು ಹೀಗೆ. “ಮೋಗ್ಲಿಂಗ್ ಈ ಪತ್ರಿಕೆಯನ್ನು ಸ್ವಮತ ಪ್ರಚಾರಕ್ಕೆ ಬಳಸದೆ ಎಲ್ಲ ವರ್ಗದವರನ್ನು ಉದ್ದೇಶಿಸಿದ ಪತ್ರಿಕೆಯನ್ನು ಮಾಡಿದ್ದು ಈತನನ್ನು ಕನ್ನಡ ಪತ್ರಿಕೋದ್ಯಮದ ಆದ್ಯನನ್ನಾಗಿ ಮಾಡಿತು”.

ಈ ಪತ್ರಿಕೆಯಲ್ಲಿ ಮಂಗಳೂರು, ಜಿಲ್ಲೆ, ರಾಜ್ಯ ಹಾಗೂ ಇತರ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದವು. ಸುಳ್ಳು ಸುದ್ದಿಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಅಪರಾಧಕ್ಕೆ ಶಿಕ್ಷೆ ಮುಂತಾದ ವಿಷಯಗಳನ್ನು ಜನರ ತಿಳುವಳಿಕೆಗಾಗಿ ಹೆಚ್ಚಾಗಿ ಪ್ರಕಟಿಸುತ್ತಿದ್ದರು.

ಈ ಪತ್ರಿಕೆಯ ಬೇಡಿಕೆ ಹೆಚ್ಚಾದಾಗ ಹೆಚ್ಚು ಪ್ರತಿಗಳನ್ನು ಮುದ್ರಿಸುವುದಕ್ಕಾಗಿ ಬಳ್ಳಾರಿ ಮಿಶನ್ ಪ್ರೆಸ್‌ನಲ್ಲಿ ಮುದ್ರಿಸಲು ಪ್ರಾರಂಭವಾಯಿತು. ಕೇವಲ ನಾಲ್ಕು ಪುಟಗಳ ಪತ್ರಿಕೆಯಾದರೂ ಬೇಡಿಕೆ ಹೆಚ್ಚಾದ್ದರಿಂದ ಹೆಚ್ಚು ಪ್ರತಿಗಳನ್ನು ಮುದ್ರಿಸಬೇಕಾಗಿತ್ತು. ಆದರೆ ಕಲ್ಲಚ್ಚು ಮುದ್ರಣದಲ್ಲಿ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಅಸಾಧ್ಯವಾದ್ದರಿಂದ ಬಳ್ಳಾರಿ ಮಿಶನ್‌ ಪ್ರೆಸ್‌ನಲ್ಲಿ ಮುದ್ರಿಸಿ ತರಲಾಗುತ್ತಿತ್ತು. ಕನ್ನಡದ ಮೊದಲ ಮುದ್ರಣ ಸಾಹಿತ್ಯದಲ್ಲಿ ನಮಗೆ ಕಾಣಸಿಗುವುದು. 1817ರ ವಿಲಿಯಂ ಕೇರಿಯವರ ಕನ್ನಡ ವ್ಯಾಕರಣ. ಇದು ಮುದ್ರಣವಾದದ್ದು ಸೆರಂಪೂರಿನಲ್ಲಿ. ಅನಂತರ ಪ್ರಾರಂಭವಾದ ಬಳ್ಳಾರಿಯಲ್ಲಿ ಲಂಡನ್ ಮಿಶನ್ ಪ್ರೆಸ್ ಆರಂಭಗೊಂಡು ಕನ್ನಡ ಮುದ್ರಣ ಆರಂಭಿಸಿತು. ಈ ಎರಡು ಪ್ರೆಸ್‌ಗಳಲ್ಲಿ ಕನ್ನಡ ಮುದ್ರಣವಾದದ್ದು ಕಲ್ಲಚ್ಚು ಮುದ್ರಣದಲ್ಲಿ ಅಲ್ಲ. ಆಗ ಕನ್ನಡ ಮತ್ತು ತೆಲುಗು ಭಾಷೆಗೆ ಒಂದೇ ಅಚ್ಚುಮೊಳೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಇಲ್ಲಿ ಮುದ್ರಣಗೊಂಡ ಪತ್ರಿಕೆಗೆ “ಕನ್ನಡ ಸಮಾಚಾರ” ಎಂಬ ಹೆಸರಾಯಿತು.( 1844 ಮಾರ್ಚ್-1844 ನವೆಂಬರ್)

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...63